20/04/2013

"U R UNIQ,SPECIAL & MASTERPIECE"

 ನಿಮಗೆ ನೀವೇ ಸಾಟಿ

ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ಎಷ್ಟೋ ಕೋರ್ಸುಗಳಿಗೆ, ವರ್ಕ್‌ಶಾಪ್‌ಗಳಿಗೆ ಮತ್ತು ಸೆಮಿನಾರ್‌ಗಳಿಗೆ ಹೋಗಿ, `ನಮ್ಮನ್ನು ಬಿಟ್ಟರೆ ಬೇರೆ ಯಾರೂ ನಮ್ಮನ್ನು ಬದಲಿಸಲು ಸಾಧ್ಯವಿಲ್ಲ' ಎಂಬ ಸತ್ಯವನ್ನು ಅರ್ಥ ಮಾಡಿಕೊಂಡವರು ನಿಜಕ್ಕೂ ಧನ್ಯರು.

`ನೀನು ಯಾರು?' ಎಂದು ಕೇಳಿದಾಗ ನಿಮ್ಮನ್ನು ನೀವು ಯಾವ ರೀತಿ ನಿರೂಪಿಸಿಕೊಳ್ಳುವಿರಿ ಎಂದು ಯೋಚಿಸಿದ್ದೀರಾ? ಆ ಪ್ರಶ್ನೆಗೆ ಏನು ಉತ್ತರಿಸಬಲ್ಲಿರಿ? ನಿಮ್ಮ ಬಗ್ಗೆ ನಿಮ್ಮ ವೃತ್ತಿಯಿಂದ, ವಿದ್ಯಾರ್ಹತೆಯಿಂದ ಅಥವಾ ಕುಟುಂಬದ ಹಿನ್ನೆಲೆ ಹೇಳುತ್ತಾ ಮಾತನ್ನು ಪ್ರಾರಂಭಿಸುವಿರಿ. ಸಮಾಜ ಯಾವ ರೀತಿ ಹೇಳಿಕೊಟ್ಟಿದೆ ಆ ರೀತಿ ಉತ್ತರಿಸುತ್ತೀರಿ ಅಲ್ಲವೇ? ಆದರೆ ನೀವು ಉತ್ತರಿಸಿದ್ದು ಒಂದರ್ಥದಲ್ಲಿ ಸರಿ, ಒಂದರ್ಥದಲ್ಲಿ ತಪ್ಪು.

ಕೆಲವರು ದೈವದತ್ತವಾಗಿ ಬೆಳೆಯುತ್ತಾರೆ. ಮತ್ತೆ ಕೆಲವರು ತಾವು ಯಾವ ದಾರಿಯಲ್ಲಿ ಬೆಳೆಯಬೇಕೋ ಆ ದಾರಿಯನ್ನು ಆರಿಸಿ ಕೊಳ್ಳುವವರಾಗಿರುತ್ತಾರೆ. ಇನ್ನು ಕೆಲವರಿಗೆ ಸ್ಫೂರ್ತಿ ಕೊಟ್ಟು ಬೆಳೆಸಬೇಕಾಗುತ್ತದೆ. ಪ್ರತಿಯೊಬ್ಬರೂ ಮತ್ತೊಬ್ಬರಿಗಿಂತ ಭಿನ್ನ ಮತ್ತು ವಿಶಿಷ್ಟ. ಆದರೆ ಎಲ್ಲರೂ ತಮ್ಮನ್ನು ತಾವು ಬೆಳೆಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ.

ಒಂದು ನಿಮಿಷ ನಿಂತು ನಿಮ್ಮ ಜೀವನದ ಹಳೆ ಪುಟಗಳನ್ನು ತಿರುವಿ ಹಾಕಿ. ಜೀವನದ ಏರುಪೇರುಗಳನ್ನು, ಸಮಯ ಸಂದರ್ಭಗಳನ್ನು, ಒಳ್ಳೆಯ ಹಾಗೂ ಕೆಟ್ಟ ಘಟನೆಗಳನ್ನು, ಸಿಹಿ ಕಹಿ ಸಂಗತಿಗಳನ್ನು ನೆನಪಿಸಿಕೊಳ್ಳಿ. ಈಗ ಅವುಗಳ ಬಗ್ಗೆ ವಿಶ್ಲೇಷಣೆ ಮಾಡಿ. ಆ ಗಳಿಗೆಗಳು ನಿಮ್ಮ ಜೀವನದ `ಟರ್ನಿಂಗ್ ಪಾಯಿಂಟ್' ಗಳಾಗಿದ್ದವಾ? ನಿಮ್ಮ ಮುಂದಿನ ಜೀವನಕ್ಕೆ ಏನು ಒಳ್ಳೆಯದು ಏನು ಕೆಟ್ಟದ್ದು ಎಂದು ಅರಿತು ನೀವು ತೀರ್ಮಾನಿಸಿ ಆರಿಸಿಕೊಂಡ ದಾರಿಯ ಬಗ್ಗೆ ಈಗ ಹೇಗನಿಸುತ್ತದೆ? ಅದರಿಂದ ಲಾಭ ಆಗಿದೆಯೇ?

ಪ್ರತಿಯೊಬ್ಬರದೂ ಒಂದೊಂದು ಕಥೆ ಇರುತ್ತದೆ. ನಿಮ್ಮ ಕಥೆ ಏನು? ನಿಮ್ಮ ಸ್ವಂತ ಜೀವನದ ಏರುಪೇರುಗಳು, ಅನುಭವಗಳನ್ನು ಅವಲೋಕಿಸಿಕೊಂಡಾಗ ಅದರಿಂದ ನಿಮಗೆ ಪಾಠ ಕಾಣಸಿಗುತ್ತದೆ. ಬರಹಗಾರ ರಾಬಿನ್ ಶರ್ಮ `ನೋವು' ಸಹ ಒಳ್ಳೆಯ `ಗುರು' ಆಗಬಹುದು ಎಂದು ಹೇಳುತ್ತಾರೆ. ಯಾರ ಕಣ್ಣಿಗೂ ಕಾಣದೇ ಇರುವ ನಿಮ್ಮ ನೋವು ನಿಮಗೆ ಒಳ್ಳೆಯ ಗುರುವಾಗಬಹುದು. ಸಾಮಾನ್ಯವಾಗಿ ಜೀವನದಲ್ಲಿ ಅನುಭವಿಸುವ ನಮ್ಮ ಸೋಲುಗಳಿಗೆ ನಾವು ಬೇರೆಯವರನ್ನು ಹೊಣೆ ಮಾಡಿಬಿಡುತ್ತೇವೆ. ಆದರೆ ಆಳವಾಗಿ ನೋಡಿದರೆ ನಮ್ಮ ಬೆಳವಣಿಗೆಗೆ, ಕಷ್ಟ-ಕಾರ್ಪಣ್ಯಗಳಿಗೆ ಬೇರೆ ಯಾರೂ ಕಾರಣರಲ್ಲ, ನಾವೇ. ನಮ್ಮನ್ನು ನಾವು ರೂಪಿಸಿಕೊಂಡ ರೀತಿ ಕಾರಣವಾಗಿರುತ್ತದೆ.

ಇಷ್ಟೆಲ್ಲ ಹೇಳುವುದರ ತಾತ್ಪರ್ಯ ಏನೆಂದರೆ `ನೀವು ಬಿಟ್ಟರೆ, ನಿಮ್ಮನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಮಾನವ ಈ ಇಡೀ ಜಗತ್ತಿನಲ್ಲೇ ಯಾರೂ ಇಲ್ಲ'. ಬೇರೆಯವರು ನಿಮ್ಮನ್ನು ಅಲ್ಪ ಸ್ವಲ್ಪ ನೋಡಿ, ಕೇಳಿ ನಿಮ್ಮ ಬಗ್ಗೆ ತಿಳಿದುಕೊಂಡಿರಬಹುದು. ಆದರೆ ಜೀವನದ ಪ್ರತಿ ಹೆಜ್ಜೆಯಲ್ಲೂ ಕ್ಷಣಕ್ಷಣದ ನಿಮ್ಮ ಅನುಭವ ನಿಮಗೆ ಮಾತ್ರ ಆಗಿರುತ್ತದೆ.

ಬೇರೆಯವರಿಗೆ ಅದರ ತಾಪವೂ ತಟ್ಟಿರುವುದಿಲ್ಲ. ಸ್ವಯಂ ಸ್ಫೂರ್ತಿಯಿಂದ ನೀವು ಬೆಳೆಯಲು, ಸಾಧನೆಯ ಗೋಪುರ ಕಟ್ಟಲು ಮತ್ತು ಅದನ್ನು ಮುಟ್ಟಲು ಏಕೈಕ ವ್ಯಕ್ತಿಯಿಂದ ಮಾತ್ರ ಸಾಧ್ಯ. ಆ ಏಕೈಕ ವ್ಯಕ್ತಿ ಬೇರೆ ಯಾರೂ ಅಲ್ಲ, ನೀವೇ. `ನಾನು' ಇಲ್ಲ ಎಂದುಕೊಂಡರೆ ನಿಮ್ಮ ಸ್ವಂತ ಅಸ್ತಿತ್ವವೇ ಇಲ್ಲವಾಗುತ್ತದೆ.

ನಿಮ್ಮ ವಿಶಿಷ್ಟತೆಯನ್ನು ಕಾಪಾಡಿಕೊಳ್ಳುವುದು ಹೇಗೆ? ಇದು ನಿಮ್ಮ ಮುಂದಿರುವ ದೊಡ್ಡ ಪ್ರಶ್ನೆ. ಉತ್ತರವೂ ಇಲ್ಲೇ ಇದೆ ನೋಡಿ.

ನಿಮ್ಮನ್ನು ನೀವು ನಂಬಿ. ನೀವು ವಿಶಿಷ್ಟವಾದ ರೀತಿಯಲ್ಲಿ ಬೆಳೆಯಲು ಅಗತ್ಯವಾದ ಪ್ರಾಕೃತಿಕ ಗುಣಗಳು ನಿಮ್ಮಳಗೇ ಇವೆ. ನಿಮ್ಮಲ್ಲಿ ಆತ್ಮವಿಶ್ವಾಸ ಬೆಳೆಸಿಕೊಂಡರೆ ಜೀವನದಲ್ಲಿ ಏನು ಮಾಡಬೇಕೋ, ಏನು ಗಳಿಸಬೇಕೋ ಅದನ್ನು ಜಯಿಸ ಬಹುದು. ನಿಮ್ಮನ್ನು ನೀವು ನಂಬಿದರೆ ಭಯ ಮಾಯವಾಗುತ್ತದೆ. ಆಗ ನಾನು ನನ್ನನ್ನು ಕಾಪಾಡಿಕೊಳ್ಳಬೇಕು ಎಂಬ ಚಿಂತೆಯೇ ನಿಮಗೆ ಬರುವುದಿಲ್ಲ. ಬೇರೆಯವರ ತಾಳಕ್ಕೆ ತಕ್ಕಂತೆ ಕುಣಿಯಬೇಕಾದ ಅವಶ್ಯಕತೆಯೂ ಇರುವುದಿಲ್ಲ. ರಹಸ್ಯ ಗೊತ್ತಾಯಿತಲ್ಲ...! ಇಂದಿನಿಂದ ನೀವು ಸ್ವತಂತ್ರ ಜೀವಿ. ಸಂತೋಷದಿಂದ ನಲಿಯುತ್ತಾ ಆಕಾಶದೆತ್ತರಕ್ಕೂ ಹಾರಿ.

ನಂಬಿಕೆ ನಿಮ್ಮಲ್ಲಿ ಶಕ್ತಿ ಮೂಡಲು ಉತ್ತೇಜಿಸುತ್ತದೆ. ನಂಬಿಕೆ ನೀವು ಯಾರು ಎಂದು ಘೋಷಿಸುತ್ತದೆ. ಇಂತಹ ಭಾವನೆಗಳು ನಿಮ್ಮ ಅಂತರಂಗವನ್ನು ಬದಲಿಸಲು ಸಹಾಯ ಮಾಡುತ್ತವೆ. ನಾನು ವಿಶಿಷ್ಟ ಎಂದು ನೀವು ಅಂದುಕೊಳ್ಳದಿದ್ದರೆ ನಿಮ್ಮಲ್ಲಿ ಏನೋ ಕಳೆದುಹೋಗಿದೆ ಎಂದರ್ಥ. `ಯು ಆರ್ ಯುನೀಕ್, ಸ್ಪೆಷಲ್ ಅಂಡ್ ಮಾಸ್ಟರ್ ಪೀಸ್'.

ನಿಮ್ಮನ್ನು ನೀವು ಹೀಗೆ ನೋಡುತ್ತಿದ್ದೀರಾ?

-ಬೇರೆಯವರಿಗೆ ಹೆದರಿಕೊಂಡು ಜೀವಿಸುತ್ತಿದ್ದೀರಾ?
-ಬೇರೆಯವರಿಗೆ ನೀವು ಅಂಟಿಕೊಂಡು ಬಿಟ್ಟಿದ್ದೀರಾ?
- ನಿಮ್ಮನ್ನು ಬೇರೆಯವರು ಆಳುತ್ತಿದ್ದಾರಾ?
-ಬೇರೆಯವರ ಮೇಲೆ ಅವಲಂಬಿತರಾಗಿದ್ದೀರಾ?
-ನಿಮ್ಮ ಆಸೆ ಆಕಾಂಕ್ಷೆಗಳಿಗೆ ಮತ್ತು ನಡವಳಿಕೆಗೆ ಬೇರೆಯವರನ್ನು ದೂಷಿಸುತ್ತಿದ್ದೀರಾ?
-ಬೇರೆಯವರ ದಬ್ಬಾಳಿಕೆಯಿಂದ ನಿಮ್ಮ ನಿಜ ಸ್ವರೂಪವನ್ನು ಮುಚ್ಚಿಡುತ್ತಿದ್ದೀರಾ?
-ನಿಮ್ಮ ಜೊತೆ ನೀವು ಸೋತುಹೋಗಿದ್ದೀರಾ?

ಹಾಗಾದರೆ ನೀವು ನಿಮ್ಮ `ಅದ್ವಿತೀಯತೆ'ಯನ್ನು ಕಳೆದುಕೊಂಡಿದ್ದೀರಿ ಎಂದರ್ಥ. ಹೀಗಿದ್ದಲ್ಲಿ ನಿಮ್ಮ ಪಾತ್ರ ಬೇರೆಯವರ ಗುಲಾಮಗಿರಿ ಮಾತ್ರ. ಪರರ ದಬ್ಬಾಳಿಕೆಗೆ ನೀವು ಜೀತದಾಳು ಆಗಿದ್ದೀರಿ. ಬೇರೆಯವರ ನಕಾಶೆಗೆ ತಕ್ಕಂತೆ ನೀವು ಕುಣಿಯುತ್ತಿದ್ದರೆ, ಆ ಕ್ಷಣದಿಂದಲೇ ನೀವು ನಿಮ್ಮ ಇಷ್ಟ, ಬಯಕೆಗಳನ್ನು ಕೊಲೆ ಮಾಡಿಕೊಳ್ಳುತ್ತಿದ್ದೀರಿ ಎಂದರ್ಥ.

ಬೇರೆಯವರು ಏನು ಹೇಳುತ್ತಾರೋ ಅದನ್ನು ನೀವು ಮಾಡುತ್ತಿದ್ದೀರಿ. ಅವರ ತಾಳಕ್ಕೆ ತಾಳ ಸೇರಿಸುತ್ತಿದ್ದೀರಿ. ನಿಮ್ಮ ಸ್ವಂತ ಜೀವನಕ್ಕೆ ಬೇರೆಯವರು ಸೂತ್ರಧಾರಿಗಳು ಎಂದು ಒಪ್ಪಿಕೊಳ್ಳುತ್ತಿದ್ದೀರಿ. ನಿಮಗೆ ಯಾವುದು ಒಳಿತು ಎನ್ನುವುದು ಬೇರೆಯವರಿಗೆ ಗೊತ್ತು, ನಿಮಗಲ್ಲ ಎಂದಾದರೆ ನಿಮ್ಮ ಅಸ್ತಿತ್ವ ಇರುವುದಾದರೂ ಯಾತಕ್ಕೆ?


No comments:

Post a Comment